Tuesday, July 21, 2009

ಸಮಾಜವು ಪತ್ರಕರ್ತರನ್ನು ವಿಭಿನ್ನವಾಗಿ ನೋಡುತ್ತಿದೆ. ಅದನ್ನು ಅರ್ಥ ಮಾಡಿಕೊಂಡು ಜವಾಬ್ದಾರಿ, ಹೊಣೆಗಾರಿಕೆಯಿಂದ ಪತ್ರಕರ್ತನಾದವನು ತನ್ನ ಸುತ್ತಮುತ್ತಲಿನ ಪ್ರದೇಶ, ಜನರಿಗೆ ಸ್ಪಂದಿಸಿ ಸಮಾಜಮುಖಿ ವರದಿ ಮಾಡಬೇಕು. ಅಂತಹ ವಾತಾವರಣ ಸೃಷ್ಠಿಸಲು ದಿನ ಮಾಧ್ಯಮ ಪತ್ರಕರ್ತರ ಸಂಘ ಪ್ರಯತ್ನಿಸಲಿದೆ ಎಂದು ಸಂಘದ ನೂತನ ಅಧ್ಯಕ್ಷ ಪರಶುರಾಮ ಕಲಾಲ್ ಹೇಳಿದರು. ನಗರದಲ್ಲಿ ರವಿವಾರ ಸಂಘದ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಕರ್ತ ಬ್ರಹ್ಮನಲ್ಲ. ಬ್ರಹ್ಮನೆಂದು ಬಗೆಯುವ ವಾತಾವರಣವಿದೆ. ಇಂತಹ ಭ್ರಮೆಯ ಕೋಟೆ ಹೊಡೆದು ಹಾಕಿ ಅತನೂ ನೆಲದ ಮೇಲೆ ನಿಂತಿರುವ ಶ್ರೀಸಾಮಾನ್ಯ ಎಂಬ ತಿಳುವಳಿಕೆ ಬೆಳೆಸಿಕೊಳ್ಳಬೇಕು. ಪತ್ರಕರ್ತನಾದವನು ಪೀತ ಪತ್ರಿಕೋದ್ಯಮದಲ್ಲಿ ತೊಡಗಿ, ಭೃಷ್ಟನಾದರೆ ಅಂತವರನ್ನು ಯಾವ ಮುಲಾಜು ಇಲ್ಲದೇ ಸಂಘದಿಂದ ಉಚ್ಛಾಟನೆ ಮಾಡಲಾಗುವುದು ಹಾಗೂ ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದರು. ಪತ್ರಕರ್ತರ ಸಂಘವು ಒಗ್ಗಟ್ಟಿನಿಂದ ಹೊಸಪೇಟೆಯಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯನ್ನು ಪ್ರಾರಂಭಿಸಲು ಹೋರಾಟ ಮಾಡಿ ಯಶಸ್ವಿಯಾಗಿದೆ. ಸರ್ಕಾರದಿಂದ ಸಕರಾತ್ಮಕ ಬೆಂಬಲ ದೊರಕಿದೆ. ಈ ದಿಶೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಜನಾರ್ಧನ ರೆಡ್ಡಿ, ಸಚಿವರಾದ ಬಿ.ಶ್ರೀರಾಮಲು, ಜಿ.ಕರುಣಾಕರ ರೆಡ್ಡಿ, ಶಾಸಕ ಆನಂದ್ ಸಿಂಗ್ ಸಹಾಯ, ಸಹಕಾರ ನೀಡಿದ್ದಾರೆ. ಪತ್ರಕರ್ತರಿಗೆ ತರಬೇತಿ, ಸಮಕಾಲೀನ ವಿಷಯಗಳ ಬಗ್ಗೆ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳುವ ಮೂಲಕ ಕ್ರಿಯಾಶೀಲತೆಯಿಂದ ಸಂಘ ಮುನ್ನೆಡೆಸುವಂತೆ ಮಾಡಬೇಕಿದೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕುಮಾರಸ್ವಾಮಿ ಮಾತನಾಡಿ ಸದಸ್ಯರ ಸಹಕಾರ ಕೋರಿದರು. ಸಂಘದ ಖಜಾಂಚಿ ಅನಂತ ಜೋಷಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವೆಂಕೋಬ ಪೂಜಾರ್ ಪ್ರಾಸ್ತಾವಿಕವಾಗಿ ಸಂಘ ಬೆಳೆದು ಬಂದ ಇತಿಹಾಸವನ್ನು ಸ್ಮರಿಸಿಕೊಂಡು ಸ್ವಾಗತಿಸಿದರು. ಹಿಂದಿನ ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪತ್ರಕರ್ತರ ಸಂಘ ಕಟ್ಟುವಾಗಿನ ಸಮಸ್ಯೆಗಳನ್ನು ಅವರು ಬಿಚ್ಚಿಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಎಸ್.ಎನ್.ಪಿ. ಪಾಟೀಲ್ ವಹಿಸಿದ್ದರು. ಪತ್ರಕರ್ತ ಸಿ.ಕೆ. ನಾಗರಾಜ್ ವಂದಿಸಿದರು. ಪತ್ರಕರ್ತರು ಸಭೆಯಲ್ಲಿ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

No comments:

Post a Comment